ಯಾಣ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದ ಪ್ರಮುಖ ಪ್ರೇಕ್ಷಣೀಯ ಸ್ಥಳ.
ಯಾಣವು ಕರಾವಳಿ ಪಟ್ಟಣವಾದ ಕುಮಟಾದಿಂದ 25 ಕಿ.ಮೀ ಮತ್ತು ಶಿರಸಿಯಿಂದ 40 ಕಿ.ಮೀ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಿಂದ 436 ಕಿ.ಮೀ. ದೂರದಲ್ಲಿದೆ.
ಯಾಣದ ಪ್ರಮುಖವಾದ ಆಕರ್ಷಣೆ ಏನಪ್ಪ ಅಂದರೆ ಭೈರವೇಶ್ವರ ಶಿಖರ ಮತ್ತು ಮೊಹಿನಿ ಶಿಖರ. ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಭೈರವೇಶ್ವರ ಶಿಖರವು 120 ಮೀಟರ್‌ಗಳ ಎತ್ತರವಿದೆ, ಮೋಹಿನಿ ಶಿಖರವು ಅದಕ್ಕಿಂತ ಚಿಕ್ಕದು ಮತ್ತು 90 ಮೀಟರ್‌ಗಳ ಎತ್ತರವಿದೆ.
ಸ್ಕಂದಪುರಾಣದ ಪ್ರಕಾರ ಭಸ್ಮಾಸುರ ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವುದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಯ ಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ
ಈ ಘಟನೆಯ ಸಮಯದಲ್ಲಿ ಹೊರಹೊಮ್ಮಿದ ಬೆಂಕಿಯು ಎಷ್ಟು ತೀವ್ರವಾಗಿತ್ತೆಂದರೆ, ಯಾಣ ಪ್ರದೇಶದಲ್ಲಿನ ಈ ಶಿಖರಗಳು ಕಪ್ಪಾದವು ಎಂದು ನಂಬಲಾಗಿದೆ.
ಭೈರವೇಶ್ವರ ಶಿಖರದ ಕೆಳಗೆ ಒಂದು ಗುಹಾಲಯವನ್ನು ಹೊಂದಿದೆ, ಅಲ್ಲಿ ಸ್ವಯಂಭು ಲಿಂಗವಿದೆ. ಗುಹಾಲಯದ ಮೇಲಿಂದ ಮಳೆ ನೀರು ಸುರಿಯುತ್ತಲೇ ಇರುತ್ತದೆ.
ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಪುಣ್ಯವೆಂಬ ನಂಬಿಕೆ ಇದೆ.
ಯಾಣ ಗುಹೆಗಳನ್ನು ಸಂದರ್ಶಿಸಲು ಅತ್ಯಂತ ಸುಂದರವಾದ ಸಮಯ ಮಾರ್ಚ್-ಮೇ ಮತ್ತು ನವಂಬರ-ಫೆಬ್ರವರಿ ಮಾಸ.
0 Comments